ಅಂದು ಮೈಸೂರಿನಿಂದ ಕೊಡಗಿನ ನನ್ನ ಮನೆಗೆ ಪ್ರಯಾಣಿಸುತ್ತಿದ್ದೆ. ದಿನವಿಡೀ ತನ್ನ ಪ್ರಖರತೆಯನ್ನು ಬೀರಿ, ನೇಸರನು ನಾಚಿಕೆಯಿಂದ ಅಂಬುಧಿಯ ಮಡಿಲನ್ನು ಸೇರಲು ಹವಣಿಸುತ್ತಿದ್ದನು. ಇದ್ದಕ್ಕಿದ್ದಂತೆ ಆಕಾಶವನ್ನು ಕರಿ ಮೋಡಗಳು ಆವರಿಸುತ್ತಿದ್ದವು.ಮಳೆಯ ಹನಿಗಳು ಬಾನಿನ ಭದ್ರಕೋಟೆಯನ್ನು ಸೀಳಿಕೊಂಡು ಧರೆಗೆ ಮುತ್ತಿಡಲು ಹಾತೊರೆಯುತ್ತಿದ್ದವು…….
ಒಂದುಕ್ಷಣ ಜಗತ್ತೇ ಭ್ರಮಾಲೋಕ ಅನಿಸುತ್ತದೆ ಅಲ್ಲವೇ…ಬಸ್ಸಿನ ಕಿಟಕಿಗೆ ಒರಗಿಕೊಳ್ಳುತ್ತಿದ್ದಂತೆ ಕೆಲವರ ಹಲವು ನೆನಪುಗಳು ಹೃದಯದ ದಡಕ್ಕೆ ಅಲೆಗಳಂತೆ ಅಪ್ಪಳಿಸಿದವು. ನೆನಪಿನ ಬುತ್ತಿಗಳು ತೆರೆಯಲಾರಂಭಿಸಿದವು.ಕೆಲವೇ ಕೆಲವು ಸಂವತ್ಸರಗಳು ನನ್ನ ಬದುಕಿನಲ್ಲಿ ಅದೆಷ್ಟು ಬದಲಾವಣೆಗಳನ್ನು ತಂದಿದ್ದವು.ನೋಡ ನೋಡುತ್ತಿದ್ದಂತೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಯಲು ಬಂದಿತ್ತು.ಈ ನಾಲ್ಕು ವರ್ಷಗಳಲ್ಲಿ “ಸ್ನೇಹಿತರು” ಎಂಬ ಶೀರ್ಷಿಕೆಯಲ್ಲಿ ಸಿಕ್ಕ ಹಲವರು “BFF” ಎಂಬ ಶೀರ್ಷಿಕೆಯಲ್ಲಿ ಸಿಕ್ಕ ಕೆಲವರು ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿದ್ದರು. ಮನಸ್ಸೆಂಬ ಅಂಗಳದಲ್ಲಿ ಅಳಿಸಲಾಗದಂತ ಹೆಜ್ಜೆ ಗುರುತು ಮೂಡಿಸಿದ್ದರು. ಈ ಎಲ್ಲಾ ಸಿಹಿವೇದನೆಗಳ ನಡುವೆ ಕೆಲವು ಹೇಳಿಕೆಗಳು ಮನಸ್ಸಿಗೆ ಘಾಸಿ ಮಾಡಿದ್ದಂತೂ ಸತ್ಯ.ಇವೆಲ್ಲದರ ಹೊರತಾಗಿ, ಜೀವನದ ಜಂಜಾಟದಲ್ಲಿ, ಜವಾಬ್ದಾರಿಗಳ ಮಧ್ಯೆ ಹೃದಯ ಮುಟ್ಟಿದ ಸ್ನೇಹಿತರನ್ನು ಕಳೆದುಕೊಳ್ಳುವ ಭಯ ಕಾಡಲಾರಂಭಿಸಿದವು.ಕೆಲವರು “ಮೊದಲೇ ಸಿಗಬಾರದಿತ್ತೇ?” ಎನಿಸಿತು…”ಪ್ರಾಣ ಸ್ನೇಹಿತ”ರ ಜೊತೆಗೆ ಕಳೆದ ನೆನಪುಗಳ ನೆನೆದಾಗ…, ಕೊಡಗಿನ ಜಡಿಮಳೆಗೆ ಕೆರೆ ಕಟ್ಟೆಗಳು ತುಂಬುವಂತೆ ಹೃದಯ ತುಂಬಿ ಬಂತು.., ಕಣ್ಣಂಚಿನಲ್ಲಿ ಹನಿಹನಿಯಾಗಿ ಮೂಡಿದ್ದ ಒಂದೆರಡು ತೊಟ್ಟು ಕಣ್ಣೀರು ಕೆನ್ನೆಯನ್ನು ಸವರುತ್ತಾ ಮರೆಯಾದವು……
ಹೀಗೆ ಲೋಕದ ಪರಿವೆಯೇ ಇಲ್ಲದೆ ಕಲ್ಪನಾಲೋಕದಲ್ಲಿ ಮುಳುಗಿ ಹೋಗಿದ್ದ ನನಗೆ ಸಿಡಿಲಿನ ಆರ್ಭಟದ ಮುಂದೆ ಜಯಿಸಲಾಗಲಿಲ್ಲ.ಎಲ್ಲಾ ನೆನಪುಗಳು ಮಿಂಚಿನಂತೆ ಮರೆಯಾದವು. ಮತ್ತದೇ ಕಹಿ ವಾಸ್ತವಕ್ಕೆ ಮರಳಲು ಮನಸು ಒಪ್ಪದಿದ್ದರೂ, ಅನಿವಾರ್ಯವಾಗಿತ್ತು. ಆದರೂ ನೆನಪುಗಳು ಅದೆಷ್ಟು ಸುಂದರ ಅಲ್ಲವೇ…ಬೇಡವೆಂದರೂ ಬೆಂಬಿಡದೆ ಬೇತಾಳದಂತೆ ಬೆನ್ನು ಹತ್ತಿ ಬರುತ್ತವೆ….
ಹಿಂದೊಮ್ಮೆಓದಿದ ಸಾಲು ನೆನಪಾಯಿತು…..”ಬದುಕು ಎಂದರೆ ಕೊನೆ ಅರಿಯದ ಪಯಣ..,ಯಾವುದೂ ಶಾಶ್ವತವಲ್ಲ…ಕೊನೆಯಲ್ಲಿ ಉಳಿಯುವುದು ಒಂದೇ.., ಹೃದಯ ತಟ್ಟಿದ ನೆನಪುಗಳು ಮಾತ್ರ...!" ಎಷ್ಟುಅರ್ಥಗರ್ಭಿತ ಅಲ್ಲವೇ..??
ಉಜ್ವಲ್ ಬೈಚನ