NEWS & EVENTS

Send us your events & news to contact@kdkgowdas.com

ಹಿಮಗಡ್ಡೆಯ ಮೇಲೆ ಕೊಡಗಿನ ಹುಡುಗಿಯ ಹೆಜ್ಜೆ ಗುರುತು : ಧೀರೆ ಭವಾನಿಯಿಂದ ಪರ್ವತಾರೋಹಣ

  ಹಿಮಗಡ್ಡೆಯ ಮೇಲೆ ಹೆಜ್ಜೆಯಿಟ್ಟು, ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಗುರಿಮುಟ್ಟಿ ಬಂದ ಯುವತಿ ಎಂಬ ಖ್ಯಾತಿಗೆ ಕೊಡಗಿನ ಹುಡುಗಿ ಟಿ.ಎನ್.ಭವಾನಿ ಭಾಜನರಾಗಿದ್ದಾರೆ.
  ಹಾಗೆ ನೋಡಿದರೆ ಸೈನ್ಯ ಸೇರಿದಂತೆ ಹಲವು ರಕ್ಷಣಾ ಪಡೆಗಳಲ್ಲಿ ಕೊಡಗಿನ ಯುವತಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಯಲ್ಲೇ ಕ್ರೀಡೆ ಸೇರಿದಂತೆ ಸಾಹಸ ಕ್ಷೇತ್ರಗಳಲ್ಲೂ ಹಿಂದೆ ಬಿದ್ದಿಲ್ಲ. ಇಂತಹ ಯುವತಿಯರ ಸ್ಪೂರ್ತಿಯನ್ನೇ ಮುಂದಿಟ್ಟುಕೊಂಡು ಪರ್ವತಾರೋಹಣದಂತಹ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಪಣ ತೊಟ್ಟಿರುವ ಭವಾನಿ ಆ ನಿಟ್ಟಿನಲ್ಲಿ ಶ್ರಮವಹಿಸುತ್ತಿದ್ದಾರೆ.
  ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ(ಶಂಭು) ಮತ್ತು ಪಾರ್ವತಿ(ದಿವ್ಯ) ದಂಪತಿ ಪುತ್ರಿಯಾಗಿರುವ ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಇದೀಗ ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೌಢಶಾಲೆಯಿಂದಲೇ ಎನ್‌ಸಿಸಿ ಸೇರಿ ಕಾಲೇಜಿನಲ್ಲೂ ಮುಂದುವರೆಸಿ ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ತರಬೆತಿ ಪಡೆದು ೨೦೧೬ರಲ್ಲಿ ನವದೆಹಲಿಯ ರಾಜಪಥ್‌ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.


  ಜೋದ್‌ಫುರ್‌ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್‌ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್‌ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್‌ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್(ಎಬಿವಿಐಎಂಎಎಸ್) ಪಡೆದಿದ್ದಾರೆ. ಆ ನಂತರ ಹೆಚ್ಚಿನ ತರಬೇತಿಯನ್ನು ಡಾರ್ಜಲಿಂಗ್‌ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್(ಹೆಚ್‌ಎಂಐ) ಪಡೆದಿದ್ದಾರೆ.
  ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‌ನಿಂದ ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಉತ್ತರಾಖಾಂಡ್‌ನ ರುಡುಗೈರ್, ಮನಾಲಿಯ ಫ್ರೆಂಡ್‌ಶಿಪ್, ಸಿಕ್ಕಿಮ್‌ನ ರೆನಾಕ್, ಲೇಹ್‌ನ ಸ್ಟಾಕ್ ಕಂಗ್ರಿಯಲ್ಲಿ ಮಂಜುಗಡ್ಡೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿರುವ ಇವರು ಭವಿಷ್ಯದಲ್ಲಿ ಗೌರಿಶಂಕರ ಶಿಖರವನ್ನೇರುವ ಕನಸು ಹೊಂದಿದ್ದಾರೆ.
ಈಜು, ಕುದುರೆ ಸವಾರಿ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ತರಬೇತಿಗಳನ್ನು ಮುಗಿಸಿದ್ದು, ಸೈನ್ಯದಲ್ಲಿ ಕೆಲಸ ಮಾಡುವ ಬಯಕೆಯನ್ನು ಹೊಂದಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಹಲವು ಯುವತಿಯರು ರಕ್ಷಣಾ ಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ ದೇಶ ಸೇವೆಯಲ್ಲಿ ತೊಡಗಿರುವುದನ್ನು ನಾವು ಕಾಣಬಹುದು. ಹೀಗಿರುವಾಗ ತಾನು ಕೂಡ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆನ್ನುವುದು ಭವಾನಿಯ ಬಯಕೆಯಾಗಿದೆ.

ನೈಟಿಂಗೇಲ್ ಆಫ್ ಕೊಡಗು

ಪ್ರತಿಭಾವಂತ ಗಾಯಕರ ಶೋಧ 

KDK Gowda Samaja UAE - Kail Mahurtha - 2017

MATRIMONY MEET @ KDK NAMMANE

Reply to the Poomale news article

 'ಪೂಮಾಲೆ' ಎಂಬ ಪತ್ರಿಕೆಯಲ್ಲಿ ಗೌಡ ಜನಾಂಗದ ಆಚಾರ ವಿಚಾರಗಳ ಬಗ್ಗೆ ಅಪಹಾಸ್ಯ ಮಾಡಿ ಬರೆದ ಸಂಪಾದಕೀಯ ವರದಿಗೆ ಸ್ಪಷ್ಟೀಕರಣ:

ಮಾನ್ಯರೆ,

ಕಾವೇರಿ ಸಂಕ್ರಮಣ ಜಾತ್ರೆಗೆ ಸಂಬಂಧಿಸಿದಂತೆ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಚರಣೆ, ಕಟ್ಟು ಬೀಳುವುದು (ಗೊನೆಕಡಿಯುವುದು) ಸೇರಿದಂತೆ ಪತ್ತಾಯಕ್ಕೆ ಅಕ್ಕಿ ಹಾಕುವುದು, ಭಂಡಾರ ತೆಗೆದುಕೊಂಡು ಹೋಗುವುದು ಒಂದು ಪದ್ದತಿ, ಆಚರಣೆ. ಜಾತ್ರೆಗಿಂತ ತಿಂಗಳ ಹಿಂದೆ ನಡೆಯುವ ಕಟ್ಟುಪಾಡುಗಳನ್ನು ಅಲ್ಲದೆ ತುಲಾಮಾಸದ ಒಂದು ತಿಂಗಳೂ ಅಭರಣ ಹಾಗು ಕ್ಷೇತ್ರದ ರಕ್ಷಣಾ ಕಾರ್ಯಕ್ಕೆ ವ್ರತದಾರಿಗಳಾಗಿ ಕೋಡಿ ಮತ್ತು ಬಳ್ಳಡ್ಕ ಮನೆತನದವರು ದೇವಾಲಯದಲ್ಲಿ ಶಸ್ತ್ರ ದಾರಿಗಳಾಗಿ ನೆಲೆಯೂರುವುದು ಅತ್ಯಂತ ಪುರಾತನ ಸಂಪ್ರದಾಯಗಳು ಹಾಗು ಅವರ ಜವಾಬ್ದಾರಿ (ಇದಕ್ಕಾಗಿಯೇ ಹಾಲೇರಿ ರಾಜರು ಕೊಡಲ್ಪಟ್ಟ  ಆಯುಧಗಳನ್ನು ಕೋಡಿ ಮನೆತನದವರು ಭಂಡಾರ ಮೆರವಣಿಗೆಯಲ್ಲಿ ಹಿಡಿಯುವುದು).

ಕೊಡಗಿನಾದ್ಯಂತ ಪ್ರಚಲಿತವಿರುವ ತಕ್ಕ ಮುಖ್ಯಸ್ಥರ ದೇವ,ದೈವ ಕಾರ್ಯಗಳ ನಿರ್ವಹಣೆ, ಸುತ್ತಮುತ್ತಲಿನ ನಾಲ್ಕು ಗ್ರಾಮದವರ ಸಹಕಾರದೊಂದಿಗೆ ಊರ ಹಬ್ಬಗಳನ್ನು ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಇದಕ್ಕಾಗಿ ಆಯಾ ಪ್ರದೇಶದಲ್ಲಿ ನೆಲೆಸಿರುವ ಪ್ರತಿಷ್ಠಿತ ಕುಟುಂಬಗಳನ್ನೆ ದೇವ ತಕ್ಕ, ಭಂಡಾರ ತಕ್ಕ, ಕಾವಲುಗಾರ ಹೀಗೆ ಕೊಡಗಿನ ಎಲ್ಲಾ ದೇವಾಲಯಗಳಲ್ಲಿ  ನೇಮಕವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಪದ್ಧತಿಗಳು, ಕಟ್ಟುಪಾಡುಗಳು, ಹಾಲೇರಿ ರಾಜರ ಆಳ್ವಿಕೆಯಲ್ಲಿ  ಆದೇಶಗಳಾಗಿ, ಮುಂದೆ ಕೊಡಗಿನ ಹಲವು ದೇವಾಲಯಗಳಲ್ಲಿ ಕೊಡವ ಜನಾಂಗದವರೂ ತಕ್ಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ.

ಇದರ ಪ್ರಕಾರ ಹಿಂದಿನಿಂದಲೂ ನಡೆದುಕೊಂಡು ಬಂದ ಆಭರಣ ಮತ್ತು ಭಂಡಾರ ತೆಗೆದುಕೊಂಡು ಹೋಗುವ ಸಂಧರ್ಭದಲ್ಲಿ, ಕೇವಲ ತಕ್ಕ ಮುಖ್ಯಸ್ಥರಾದಿಯಾಗಿ(ಬಲ್ಲಡ್ಕ ಹಾಗು ಕೋಡಿ ಮನೆ) ಬೆರಳೆಣಿಕೆಯಷ್ಟು ಕುಟುಂಬ ಹಾಗು ಊರವರು ಭಾಗವಹಿಸುತಿದ್ದರು. ಇದನ್ನು ಕಂಡ ಭಕ್ತರು, ಒಂದು ದೊಡ್ಡ ಉತ್ಸವವಾಗಿ, ಕಾವೇರಿ ಮಾತೆಯ ಸನ್ನಿದಿಯ ಸಂಪ್ರದಾಯವನ್ನು ಜಗಜ್ಜಾಹಿರಾತು ಮಾಡುವ ಉದ್ದೇಶದಿಂದ, ಹಲವು ವರ್ಷಗಳಿಂದ, ಭಾಗಮಂಡಲ ನಾಡಿನ ಗೌಡ ಜನಾಂಗದವರು, ಗೌಡ ಸಮಾಜಗಳ ಸಹಕಾರದೊಡನೆ ಆಭರಣ ಮತ್ತು ಭಂಡಾರ ತೆಗೆದುಕೊಂಡು ಹೋಗುತ್ತಿರುವುದು, ಕಾವೇರಿ ಮಾತೆಯ ಕೃಪೆಗೆ ಪಾತ್ರರಾಗಲು ಮಾಡುವ ಕಿರುಸೇವೆ ಅಷ್ಟೆ. 

ಆದರೆ ಈ ವಿಷಯವನ್ನಿಟ್ಟುಕೊಂಡು, ಪೂಮಾಲೆ ಎಂಬ ಕೊಡವ ಬಾಷೆಯ ಪತ್ರಿಕೆಯೊಂದರ ಸಂಪಾದಕ- ಅಜ್ಜನಿಕಂಡ ಸಿ. ಮಹೇಶ್ ನಾಚಯ್ಯನವರು, ಅವರ ಜನಾಂಗದ ಮೇಲೆ ಗೌಡ ಜನಾಂಗದವರು ಸವಾರಿ ಮಾಡುತ್ತಿದ್ದಾರೆ ಎಂಬ ರೀತಿಯ ಹೇಳಿಕೆಯು ಹಾಗು ಇನ್ನಿತರ ಕೀಳು ಭಾಷೆಯಲ್ಲಿ ವರ್ಣನೆ  ಹಾಸ್ಯಾಸ್ಪದ. ಇವರು ತಿಳಿದಂತೆ ಆಚರಣೆಗಳು ಇಂದು ನಿನ್ನೆಯದಲ್ಲ. ಅಲ್ಲದೆ, ಯಾವುದೇ ಜನಾಂಗದ ಮೇಲೆ ಸವಾರಿ ಮಾಡುವ ಉದ್ದೇಶ ಸದ್ಯಕ್ಕೆ ಯಾರೂ ಹೊಂದಿಲ್ಲ ಹಾಗು ಅದರ ಅಗತ್ಯತೆಯೂ ಇಲ್ಲ. ಅವರೇ ಹೇಳಿದಂತೆ, ಕಾವೇರಿ ಮಾತೆ ಕೇವಲ ಗೌಡ ಅಥವಾ ಕೊಡವ ಜನಾಂಗದ ಸ್ವತ್ತಲ್ಲ. ಸಮಸ್ತ ನಾಡಿನ, ರಾಜ್ಯ, ಅಂತರರಾಜ್ಯ ಜನರ ಜೀವನಾಡಿಯಾಗಿ, ಕುಲದೇವಿಯಾಗಿ ಆರಾಧಿಸಲ್ಪಡುತ್ತಿದ್ದಾಳೆ. ಹೊರ ರಾಜ್ಯದ ಭಕ್ತರು ಕೂಡ ಹಲವು ದಶಕಗಳಿಂದ ಅನೇಕ ಸೇವಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

ಸಂಪ್ರದಾಯ, ಪದ್ದತಿಗಳು, ಮಹೇಶ್ ನೊಡಿದ ಒಂದು ದಿನದ ಆಚರಣೆಯಲ್ಲ. ಮುಂದಿನ ವರ್ಷ ಖುದ್ದಾಗಿ ಬಂದು ನೋಡಿ ತಿಳಿದು ಮಾತಾಡಲಿ. ಅದೇ ರೀತಿ, ಕಾವೇರಿ ತೀರ್ಥ ಬರುವ ದಿನ ಕೆಲವು ಕೊಡವ ಭಕ್ತರು ದುಡಿಹಾಡು, ಆರತಿ ಬೇಳಗುವ ಇತ್ತೀಚೆಗಿನ ಕಳೆದೆರೆಡು ವರ್ಷಗಳ ಹೊಸ ಸಂಪ್ರದಾಯವನ್ನು ನೀವು ನೊಡಿಲ್ಲವೆ? ಗೌಡ ಜನಾಂಗ ಇದುವರೆಗೆ ಇದನ್ನು ಟೀಕಿಸಿದೆಯೆ?

ಅಜ್ಜನಿಕಂಡ ಸಿ ಮಹೇಶ್ ನಾಚಯ್ಯನವರೆ, ನಿಮ್ಮಲ್ಲಿ ಒಂದು ವಿನಂತಿ. ಬಹುಸಂಖ್ಯಾತರಾಗಿರುವ ಗೌಡ ಹಾಗು  ಕೊಡವ ಜನಾಂಗದ ನಡುವೆ ಅಣ್ಣ ತಮ್ಮಂದಿರು ಎಂಬ ಭಾವನೆ ಇದೆ. ಕೆಲವು ವಿಷಯಗಳಲ್ಲಿ ವೈಷಮ್ಯವಾಗಿದ್ದರು, ಅದು ಅಣ್ಣ ತಮ್ಮಂದಿರ ಜಗಳ ಮಾತ್ರ. ಇದನ್ನೇ ನೀವು ಶಕುನಿ ರೀತಿ ಜನಾಂಗಗಳ ಮದ್ಯೆ ಒಡಕು ತರದಿರಿ. ಇಂದು ಎಲ್ಲಾ ಜನಾಂಗದಲ್ಲಿ ಇರುವಂತೆ , ಒಂದು ಒಳ್ಳೆಯ ಸಂಸ್ಕೃತಿ ಇರುವವರ ಮದ್ಯೆ ಕೆಲವು ಕುನ್ನಿ ಮತ್ತು ಉಗ್ರಗಾಮಿ ವ್ಯಕ್ತಿತ್ವದವರ ಕುತಂತ್ರ ರೀತಿ ತಮ್ಮ ಹೇಳಿಕೆ ಆಗುವುದು ಬೇಡ. ನಿಮ್ಮ ಹೇಳಿಕೆಗಳು, ಒಬ್ಬ ಜವಾಬ್ದಾರಿಯುತ ಪತ್ರಿಕೆಯ ಸಂಪಾದಕರಿಂದೆನಿಸಿಕೊಳ್ಳಲು ತರವಲ್ಲ. ಅದನ್ನು ಬಿಟ್ಟು ಎಲ್ಲಾ ಜನರ ಒಗ್ಗಟ್ಟಿಗೆ, ದೇಶದ ಸಮೃದ್ಧಿಗೆ ಜೊತೆಗೊಂಡು ಮುಂದುವರೆಯೋಣ.

ವಂದನೆಗಳೋಂದಿಗೆ,

 

_ಭಾಗಮಂಡಲ ನಾಡಿನ ಜನತೆ ಪರವಾಗಿ, ಕೋಡಿ, ಬಳ್ಳಡ್ಕ, ಕುಯ್ಯಮುಡಿ ಮನೆತನದವರು, ಕೊಡಗಿನಾದ್ಯಂತ ಯುವ ಸಂಘಟನೆ ಹಾಗು ವೇದಿಕೆಗಳು, ಹಿತೈಷಿಗಳು, ಭಕ್ತರು, ಎಲ್ಲೆಡೆ ಪಸರಿಸಿರುವ ಅರೆಭಾಷಿಕ ಗೌಡ ಬಂದುಗಳು._

Highlights of YuvaTaranga - 2017

Prithvi
Ad Sponsored